ತಿರುಪತಿ		

	ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ, ಚಂದ್ರಗಿರಿ ತಾಲ್ಲುಕಿನಲ್ಲಿರುವ ಪ್ರಸಿದ್ಧ ವಿಷ್ಣುಕ್ಷೇತ್ರ. ಯಾತ್ರಾಸ್ಥಳ. ಉ. ಅ. 13o 39' ಮತ್ತು ಪ.ರೇ. 79o 25' ಮೇಲಿದೆ. ತಿರುಪತಿ ಎಂಬ ಹೆಸರಿನ ಪಟ್ಟಣ, ಅದರ ಪಕ್ಕದಲ್ಲಿರುವ ಬೆಟ್ಟದ ಮೇಲಿರುವ ತಿರುಮಲ ಕ್ಷೇತ್ರ- ಎರಡನ್ನೂ ತಿರುಪತಿ ಎಂದೇ ಕರೆಯುವುದು ರೂಢಿ. ಮೂರು ಚ.ಮೈ. ವಿಸ್ತೀರ್ಣದ ತಿರುಪತಿ ಪಟ್ಟಣ ಮದ್ರಾಸಿನಿಂದ 90 ಮೈ. ದೂರದಲ್ಲಿ, ಮದ್ರಾಸ್ - ಮುಂಬಯಿ ರೈಲುಮಾರ್ಗದ ರೇಣುಗಳುಂಟಾ ಜಂಕ್ಷನ್‍ನಿಂದ 6 ಮೈ. ದೂರದಲ್ಲಿ ಇದೆ. ಮದ್ರಾಸ್, ವಿಜಯವಾಡ. ಕಾಟ್ಪಾಡಿಗಳಿಂದ ಇಲ್ಲಿಗೆ ರೈಲ್ವೆ ಸಂಪರ್ಕವುಂಟು. ಇಲ್ಲಿಂದ ದೇಶದ ಮುಖ್ಯ ಸ್ಥಳಗಳಿಗೆ ರಸ್ತೆ ಹಾಗೂ ವಿಮಾನ ಸಂಪರ್ಕವೂ ಇವೆ. ಪೂರ್ವಘಟ್ಟದ ಬೆಟ್ಟಗಳ ಶ್ರೇಣಿಯೊಂದರ ಮಡಿಲಲ್ಲಿ ಪವಡಿಸಿದಂತಿರುವ ತಿರುಪತಿ ಪಟ್ಟಣದ ಜನಸಂಖ್ಯೆ 65,843(1971). ಇಲ್ಲಿ ಇರುವ ವೆಂಕಟೇಶ್ವರ ವಿಶ್ವವಿದ್ಯಾನಿಲಯ 1954ರಲ್ಲಿ ಸ್ಥಾಪಿತವಾಯಿತು. ಇದು ಆಂಧ್ರಪ್ರದೇಶದ ಮೂರನೆಯ ವಿಶ್ವವಿದ್ಯಾನಿಲಯ. ಇಲ್ಲಿ ಒಂದು ಪ್ರಾಚ್ಯ ಮಹಾವಿದ್ಯಾಲಯವೂ ಒಂದು ಸಂಶೋಧನೆ ಕೇಂದ್ರವೂ ಇವೆ. ತಿರುಪತಿಯ ಆಟದ ಸಾಮಾನುಗಳು ಪ್ರಸಿದ್ಧ. 

	ತಿರುಪತಿ ಬಳಿಯ ಪೂರ್ವಘಟ್ಟ ಶ್ರೇಣಿಗೆ ಶೇಷಾಚಲ, ವೆಂಕಟಾಚಲ ಮುಂತಾದ ಹೆಸರುಗಳಿವೆ. ತಿರುಮಲೆ ಬೆಟ್ಟಗಳು ಸು. 10ಚ.ಮೈ. ಪ್ರದೇಶವನ್ನು ಆವರಿಸಿಕೊಂಡಿವೆ. ಈ ಶ್ರೇಣಿ ಶೇಷಾಚಲ, ನಲ್ಲಮಲ ಮತ್ತು ನಾಗರಿ ಬೆಟ್ಟಗಳ ಶ್ರೇಣಿಗಳೊಂದಿಗೆ ಕೂಡಿಕೊಂಡಿದೆ. ಈ ಬೆಟ್ಟ ಆದಿಶೇಷನ ಶರೀರದಂತೆ ಹಬ್ಬಿದೆಯೆಂಬುದು ಭಕ್ತರ ಕಲ್ಪನೆ, ತಿರುಮಲೆಯ ಏಳು ಬೆಟ್ಟಗಳೂ ಆದಿಶೇಷನ ಏಳು ಹೆಡೆಗಳೆಂದು ಹೇಳಲಾಗಿದೆ. ಸಮುದ್ರಮಟ್ಟದಿಂದ 2,800' ಎತ್ತರದಲ್ಲಿರುವ ತಿರುಮಲೆಯ ವಾಯುಗುಣ ಹಿತಕರವಾದ್ದು. ಇಲ್ಲಿಯ ಜನಸಂಖ್ಯೆ 12,879 (1971).                          (ಬಿ.ಬಿ.ಒ.)

	ತಿರುಪತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವಾರಸ್ಯವಾದ ಪ್ರಾಚೀನ ಸ್ಥಳಪುರಾಣವಿದೆ. ತಿರುಮಲ ಒಂದು ಕಾಲದಲ್ಲಿ ಮೇರು ಪರ್ವತದ ಒಂದು ಭಾಗವಾಗಿದ್ದಿತಂತೆ. ಒಮ್ಮೆ ಆದಿಶೇಷನಿಗೂ ವಾಯುದೇವನಿಗೂ ಆದ ಹೋರಾಟದಿಂದಾಗಿ ಇಡಿಯ ಪರ್ವತ ಎರಡು ಹೋಳಾಗಿ ಅದರಲ್ಲೊಂದು ಭೂಮಿಗೆ ಬಿದ್ದಿತಂತೆ. ಅದೇ ಇಂದಿಗೂ ಮಹಾವಿಷ್ಣುವಿನ ಪ್ರಿಯ ವಾಸಸ್ಥಳವಾಗಿ ತಿರುಮಲ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇಲ್ಲಿ ಸ್ವಾಮಿಪುಷ್ಕರಿಣಿ, ಆಕಾಶಗಂಗೆ, ಪಾಪವಿನಾಶನಂ ಮೊದಲಾದ ದಿವ್ಯ ತೀರ್ಥಗಳಿವೆ. ಇಲ್ಲಿನ ದೇವಸ್ಥಾನ ಹಾಗೂ ದೇವರು ತುಂಬ ಪ್ರಾಚೀನ, ವೆಂಕಟೇಶ ಎಂಬ ಹೆಸರು ಋಗ್‍ವೇದದಲ್ಲುಂಟು. 
 ವೆಂಕಟಾಚಲ ಮಹಾತ್ಮೆಯಲ್ಲಿ ದ್ವಾದಶ ಮಹಾಪುರಾಣಗಳಲ್ಲಿ ಬರುವ ಈ ಸಂಬಂಧದ ವೃತ್ತಾಂತವನ್ನೆಲ್ಲ ಸಂಗ್ರಹಿಸಿಲಾಗಿದೆ. ದೇವಸ್ಥಾನದಲ್ಲಿನ ಮೂಲವಿಗ್ರಹ ಶಿಲ್ಪಕೃತವಲ್ಲ, ಸ್ವಯಂಭು ಎಂದು ನಂಬಿಕೆ, ಮಹಾವಿಷ್ಣು ತಾನು ಕೊಟ್ಟ ಭಾಷೆಯಂತೆ ಕಲಿಯುಗದಲ್ಲಿ ಶ್ರೀನಿವಾಸನಾಗಿ ಪದ್ಮಾವತಿಯನ್ನು ವರಿಸಿ ಇಲ್ಲಿ ನಿಂತನೆಂದು ಪ್ರತೀತಿ. 

	ಮುಖ್ಯ ದೇವಸ್ಥಾನ ಪಲ್ಲವ ವಾಸ್ತು ಶೈಲಿಗೆ ಉತ್ತಮ ನಿದರ್ಶನವಾಗಿದೆ. ವಿಚಿತ್ರ ಕೆತ್ತನೆಗಳಿಂದ ಕೂಡಿದ ಗೋಪುರ ಪೂರ್ವಾಭಿಮುಖವಾಗಿದೆ. ಗರ್ಭಗುಡಿಯ ಮೇಲಣ ವಿಮಾನಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿದೆ. 	      (ಜಿ.ಎಸ್.) 

	ಮೂಲವಿಗ್ರಹ ಶಿವ ಹಾಗೂ ವಿಷ್ಣು- ಇಬ್ಬರ ಪ್ರತೀಕವೂ ಆಗಿದ್ದು ಶೈವರನ್ನೂ ವೈಷ್ಣವರನ್ನೂ ಸದಾ ತನ್ನೆಡೆಗೆ ಆಕರ್ಷಿಸುತ್ತಿದೆ. ಮೂರ್ತಿಯ ಹಿಂದಿನ ಎರಡು ಕೈಗಳಲ್ಲಿ ಶಂಖಚಕ್ರಗಳಿವೆ. ಎರಡು ಕೈಗಳಲ್ಲಿ ಒಂದು ಸೊಂಟದ ಮೇಲಿದೆ. ಇನ್ನೊಂದು ಅಭಯಮುದ್ರೆಯಲ್ಲಿದೆ. ಈ ಎರಡೂ ಕೈಗಳ ಮೇಲೆ ಭುಜಂಗ ವಲಯವಿದೆ. 

	ದೇವರಿಗೆ ನಡೆಯುವ ಪೂಜಾದಿಗಳಲ್ಲಿ ಕರ್ಪೂರ ಕೇಸರಿ ಹಾಗೂ ಕಸ್ತೂರಿ ಲೇಪನ ಬಹು ಮುಖ್ಯವಾದುದು. ಹರಕೆ ಹೊತ್ತು ಜನ ತಮ್ಮ ಕೂದಲನ್ನೂ ಮುಡಿಪಾಗಿ ದೇವರಿಗೆ ಅರ್ಪಿಸುವುದು ಇಲ್ಲಿನ ಇನ್ನೊಂದು ಮುಖ್ಯ ವಿಷಯ. ಇಲ್ಲಿ ನಡೆವ ಉತ್ಸವಗಳಲ್ಲಿ ಭಾದ್ರಪದ ಮಾಸದಲ್ಲಿ ಒಂಬತ್ತು ದಿನ ನಡೆಯುವ ಬ್ರಹ್ಮೋತ್ಸವ ಬಹು ಮುಖ್ಯವಾದ್ದು. ಪ್ರತಿ ಮೂರು ವರ್ಷಗಳಿಗೊಮ್ಮೆ ನವರಾತ್ರಿ ಬ್ರಹ್ಮೊತ್ಸವ ಸಹ ನಡೆಯುತ್ತವೆ. 

	ಭಕ್ತಾದಿಗಳು ಶ್ರೀನಿವಾಸನ ಅನೇಕ ಪವಾಡಗಳನ್ನು ಕಂಡಿದ್ದಾರೆ. ವಾಸಿಯಾಗಲಾರದ ದುಷ್ಟರೋಗವೊಂದರಿಂದ ನರಳುವ ಹೆಂಗಸೊಬ್ಬಳು ದರ್ಶನಕ್ಕಾಗಿ ಬಂದು ಆರೋಗ್ಯವಾಗಿ ಹಿಂತಿರುಗಿದಳಂತೆ. ಮತ್ತೊಬ್ಬನಿಗೆ ಒಂದು ವಜ್ರದ ಉಂಗುರ ಸಿಕ್ಕಿದಾಗ ಅದನ್ನು ಹಿಡಿದ ಅವನ ಕೈ ಇದ್ದಕ್ಕಿದಂತೆ ಸಿಡಿಯಲು ಪ್ರಾರಂಭಿಸಿತು. ಆಗ ಆತ ಆ ಉಂಗುರವನ್ನು ಸ್ವಾಮಿಗೆ ಕಾಣಿಕೆಯಾಗಿ ಕೊಡಲು ನಿರ್ಧರಿಸಿದ. ಆದರೆ ಉಂಗುರದ ಮೇಲೆ ಚಪಲವಿತ್ತಾಗಿ ಆತ ಅದನ್ನೇ ದೇವರಿಗೆ ಕೊಡದೆ ಅದರ ಬೆಲೆಯಷ್ಟು ಹಣವನ್ನು ಹುಂಡಿಗೆ ಹಾಕಿದನಂತೆ. ಹಾಗೆ ಹಾಕುತ್ತಿರುವಾಗ ಅವನಿಗೆ ಅರಿವಿಲ್ಲದೆ ತೊಟ್ಟಿದ್ದ ಉಂಗುರ ಕಳಚಿ ಹುಂಡಿಗೆ ಬಿದ್ದಿತಂತೆ. ಭಕ್ತಪುಳಕಿತನಾಗಿ ಅದಕ್ಕೂ ಕೃಷ್ಣಾರ್ಪಣ ಎಂದನಂತೆ. 

	ಮತ್ತೊಂದು ಮಹಾ ಪವಾಡವೆಂದರೆ ತ್ಯಾಗರಾಜರಿಗೆ ದೈವ ಪ್ರತ್ಯಕ್ಷವಾದ್ದು. ಮುಚ್ಚಿದ ಗರ್ಭಗೃಹದ ಎದುರು ನಿಂತು ತ್ಯಾಗರಾಜರು ತೆರತೀಯಗರಾದ ಎಂಬ ಕೀರ್ತನೆಯನ್ನು ಹಾಡಿದಾಗ ಬಾಗಿಲುಗಳು ತಾವಾಗಿ ತೆಗೆದುವಂತೆ. ತ್ಯಾಗರಾಜರಿಗೆ ದೇವರ ದರ್ಶನವಾಯಿತಂತೆ. 

	ಇಂದಿಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ತಿರುಪತಿಗೆ ಯಾತ್ರೆ ಮಾಡುತ್ತಿದ್ದಾರೆ. ಪ್ರತಿನಿತ್ಯವೂ ಕನಿಷ್ಠ ಪಕ್ಷ 10,000 ಜನ ಬರುತ್ತಾರೆಂದು ಅಂದಾಜು ಮಾಡಲಾಗಿದೆ. ತಿರುಪತಿ ದೇವಸ್ಥಾನ ಪ್ರಪಂಚದಲ್ಲೇ ಅತಿ ಶ್ರೀಮಂತವಾದುದು 1973ರಲ್ಲಿ ಕೇವಲ ಹಣದ ರೂಪದಲ್ಲಿ ಬಂದ ಕಾಣಿಕೆಯೇ 8 ಲಕ್ಷ ರೂಪಾಯಿ. ದೇವಸ್ಥಾನಕ್ಕೆ ಕಾಣಿಕೆಯಾಗಿ ಬಂದ ಹಣವೆಲ್ಲವೂ ಸರ್ಕಾರದಿಂದ ನೇಮಕವಾದ ಧರ್ಮ ದರ್ಶಿಮಂಡಳಿಯೊಂದರಿಂದ ಈಗ ವಿದ್ಯಾದಿ ವಿಷಯಗಳಿಗೆ ಸದ್ವಿನಿಯೋಗವಾಗುತ್ತಿದೆ. ಬೆಟ್ಟಕ್ಕೆ ಹತ್ತಲು ಕಾಲುದಾರಿ ಹಾಗೂ ಬಸ್ಸು ಮಾರ್ಗಗಳಿವೆ. ಅನೇಕ ಭಕ್ತರು ಕಾಲುನಡಿಗೆಯಿಂದಲೇ ಬೆಟ್ಟವನ್ನು ಹತ್ತುವರು. ಬೆಟ್ಟದ ಮೇಲೆ ಮತ್ತು ಕೆಳಗೆ ಇಳಿದು ಕೊಳ್ಳಲು ಅನೇಕ ಛತ್ರಗಳಿವೆ. 

	ಕಾಂಚೀಪುರದ ಪಲ್ಲವ ಅರಸರು (9ನೆಯ ಶತಮಾನ) ತಂಜಾವೂರಿನ ಚೋಳರು (10ನೆಯ ಶತಮಾನ), ಮದುರೆಯ ಪಾಂಡ್ಯರು, ವಿಜಯ ನಗರದ ಅರಸರು(14-15ನೆಯ ಶತಮಾನಗಳು) ಹಾಗೂ ಮರಾಠಾ ಸರದಾರರು ಇಲ್ಲಿನ ದೇವಸ್ಥಾನಕ್ಕೆ ಆಗಮಿಸಿ ತಮ್ಮ ಕಾಣಿಕೆಯನ್ನು ಸಲ್ಲಿಸಿದ್ದಾರೆ. ವಿಜಯನಗರದ ಪ್ರಸಿದ್ಧ ಅರಸನಾದ ಕೃಷ್ಣದೇವರಾಯ ಹಾಗೂ ಆತನ ಪತ್ನಿಯ ಮೂರ್ತಿಗಳು ಇಲ್ಲಿವೆ. ಮರಾಠಾ ಸರದಾರನಾದ ರಘೋಜಿ ಭೋನ್‍ಸ್ಲೆ ಯಾತ್ರೆಗಾಗಿ ಬಂದು, ದೇವಸ್ಥಾನದ ಅರ್ಚನೆಗೆ ಖಾಯಂ ವ್ಯವಸ್ಥೆಮಾಡಿ ದೇವರಿಗೆ ಅನೇಕ ಆಭರಣಗಳನ್ನೂ ಅಮೂಲ್ಯವಾದ ಪಚ್ಚೆಯೊಂದನ್ನೂ ಒಪ್ಪಿಸಿದ. ಈಗಲೂ ಇದನ್ನು ಅವನ ಹೆಸರಿನಲ್ಲಿ ಪೆಟ್ಟಗೆಯಲ್ಲಿ ಇಡಲಾಗಿದೆ. 

	ಬೆಟ್ಟದ ತಪ್ಪಲಿನಲ್ಲಿ ಗೋವಿಂದರಾಜನ ದೇವಸ್ಥಾನವಿದೆ. ಕುಬೇರ ಶ್ರೀನಿವಾಸನಿಗೆ ಕೊಟ್ಟ ಹಣವನ್ನು ಬಳಸಿದ ಕೊಳಗವನ್ನು ತಲೆದಿಂಬಾಗಿಟ್ಟುಕೊಂಡು ಮಲಗಿರುವಂತೆ ಗೋವಿಂದರಾಜನ ವಿಗ್ರಹವನ್ನು ಕಡೆಯಲಾಗಿದೆ. ಈ ದೇವಸ್ಥಾನವನ್ನು ರಾಮಾನುಜಾಚಾರ್ಯರು ಸ್ಥಾಪಿಸಿದರೆಂದೂ ತಿರುಪತಿ ಪಟ್ಟಣವನ್ನು ಯೋಜಿಸಿದವರೂ ಅವರೇ ಎಂದೂ ನಂಬಲಾಗಿದೆ. ತಿರುಪತಿಯಲ್ಲಿ ಕೋದಂಡರಾಮ, ಕಪಿಲೇಶ್ವರ ದೇವಾಲಯಗಳೂ ಇವೆ. 

	ತಿರುಪತಿ ಆಗ್ನೇಯದಲ್ಲಿ 3 ಮೈ. ದೂರದಲ್ಲಿರುವ ತಿರುಚಾನೂರಿನಲ್ಲಿರುವುದು ಪದ್ಮಾವತಿಯ ದೇವಸ್ಥಾನ. ತಿರುಪತಿಗೆ ಬರುವ ಭಕ್ತರು ಈ ದೇವಾಲಯವನ್ನೂ ಸಂದರ್ಶಿಸುವುದು ರೂಢಿ. ದೇಗುಲದ ಬಳಿಯಲ್ಲಿರುವ ಪದ್ಮ ಸರೋವರದಲ್ಲಿ ಕಮಲವೊಂದರಲ್ಲಿ ಪದ್ಮಾವತಿ ಅವತರಿಸಿದಳೆಂದು ನಂಬಿಕೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ